ಶ್ರೀವಿಕ್ರಮ
	ತಲಕಾಡಿನ ಗಂಗವಂಶದ ದೊರೆ (ಸು. 629-54.) ಮುಷ್ಕರನಿಗೆ ಸಿಂಧೂ ರಾಜಕುಮಾರಿಯಲ್ಲಿ ಜನಿಸಿದ ಇವನು, ಪ್ರಾಯಶಃ ತನ್ನ ಚಿಕ್ಕಪ್ಪ ಘಲವೀರನ ಅನಂತರ ಪಟ್ಟಕ್ಕೆ ಬಂದ. ಪೊನವಿನೀತ ಇವನ ಬಿರುದು. ಈತ ಹದಿನಾಲ್ಕು ವಿದ್ಯೆಗಳಲ್ಲೂ ರಾಜನೀತಿಯಲ್ಲೂ ವಿಶೇಷವಾದ ಜ್ಞಾನವನ್ನು ಹೊಂದಿದ್ದು ಸಮಗ್ರ ನೀತಿಶಾಸ್ತ್ರದ ಪ್ರವಚನ ಪ್ರಯೋಗದಲ್ಲಿ ನೈಪುಣ್ಯತೆಯನ್ನು ಪಡೆದಿದ್ದುದಾಗಿ ಶಾಸನಗಳು ತಿಳಿಸುತ್ತವೆ. ಇವನು ತನ್ನ ಪರಾಕ್ರಮದಿಂದ ಅನೇಕ ಜನಪದಗಳನ್ನು ಸ್ವಾಧೀನಪಡಿಸಿಕೊಂಡನೆಂದೂ ತನ್ನ ಪ್ರತಾಪದಿಂದ ಸಕಲ ಸಾಮಂತರನ್ನು ಬಗ್ಗಿಸಿದನೆಂದೂ ಒಂದು ಶಾಸನ ತಿಳಿಸುತ್ತದೆ. ಆದರೆ ವಿವರಗಳು ದೊರೆಯುವುದಿಲ್ಲ.

	ಕಾವೇರಿ ನದಿಗೆ ಕಟ್ಟೆ ಕಟ್ಟಿಸಿದ ಪ್ರಸಿದ್ಧ ಕರಿಕಾಲನ ವಂಶಜನಾದ ಚೋಳ ದೊರೆಯೊಬ್ಬನ ಮಗಳನ್ನು ಶ್ರೀವಿಕ್ರಮ ವರಿಸಿದ. ಇವರಿಗೆ ಭೂವಿಕ್ರಮನೆಂಬ ಮಗ ಜನಿಸಿದ.	
				
		(ಟಿ.ಎಸ್.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ